ಮಾರ್ಕ್, ಸ್ಪಿಟ್ಸ್
ಪ್ರಸಿದ್ಧ ಈಜುಗಾರ. 1972ರ ಒಲಿಂಪಿಕ್ಸ್‍ನಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದು ವಿಶ್ವದಾಖಲೆ ಸ್ಥಾಪಿಸಿದ ವೀರ. ಈತ ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯ ಸಂಸ್ಥಾನದ ಮಾಡಸ್ಟೋನಲ್ಲಿ. ಈತನಿಗೆ ಎರಡು ವರ್ಷವಾದಾಗ ಮನೆಯವರೆಲ್ಲ ಹವಾಯ್ ದ್ವೀಪಗಳ ರಾಜಧಾನಿ ಹೊನಲುಲು ನಗರಕ್ಕೆ ವಲಸೆ ಬಂದರು. ಇದರಿಂದಾಗಿ ಇತನಿಗೆ ಕಡಲಿನ ಸಹವಾಸ ಬೆಳೆಯಿತು. ನಾಲ್ಕು ವರ್ಷಗಳ ಬಳಿಕ ಕುಟುಂಬ ಮತ್ತೆ ಕ್ಯಾಲಿಫೋರ್ನಿಯಾಕ್ಕೆ ಬಂದಾಗ ಈತನ ಈಜಿನ ತರಬೇತಿಗೆ ಅನುಕೂಲವಾಯಿತು. ಸ್ಪಿಟ್ಸ್ ತನ್ನ 10ನೆಯ ವಯಸ್ಸಿನಲ್ಲಿ ಮೊತ್ತ ಮೊದಲ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ, 48 ಮೀ ಬಟರ್ ಫ್ಲೈ ಈಜನ್ನು 31 ಸೆಕೆಂಡುಗಳಲ್ಲಿ ಮುಗಿಸಿದ. ಇದು 9-10 ವಯೋಮಾನದ ಹುಡುಗರಲ್ಲಿ ದಾಖಲೆ ಆಯಿತು.
1964ರ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ ಷೊಲಾಂಡರನನ್ನು 1968ರ ಒಲಿಂಪಿಕ್ಸ್‍ನಲ್ಲಿ ಸೋಲಿಸಿ ಆರು ಚಿನ್ನದ ಪದಕಗಳನ್ನು ಪಡೆಯುತ್ತೇನೆಂದು ಕೊಚ್ಚಿದ, ಆದರೆ ಈತ ಪಡೆದಿದ್ದು ಎರಡು ಪದಕಗಳು ಅದೂ ರಿಲೇ ಸ್ಪರ್ಧೆಗಳಲ್ಲಿ. ಈ ಅವಮಾನದಿಂದ ಅಮೆರಿಕಕ್ಕೆ ಹಿಂದಿರುಗಿದ. ಸ್ಪಿಟ್ಸ್ ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಈಜನ್ನು ಅಭ್ಯಾಸ ಮಾಡಿದ, ಈಜುಗಾರರಿಗೆ ಪ್ರೋತ್ಸಾಹಿಸುತ್ತಿದ್ದ ಇಂಡಿಯಾನ ವಿಶ್ವವಿದ್ಯಾಲಯ ಸೇರಿ ಪದವಿ ಪಡೆದ. ಈತ ಫ್ರೀಸ್ಟೈಲ್ ಹಾಗೂ ಬಟರ್ ಫ್ಲೈ ರೀತಿಯಲ್ಲಿ 28 ಬಾರಿ ಪ್ರಪಂಚ ದಾಖಲೆ ಸ್ಥಾಪಿಸಿದ, ಎಲ್ಲಕ್ಕೂ ಹೆಚ್ಚಿನ ಸಾಧನೆ ಎಂದರೆ 1972ರ ಮ್ಯೂನಿಕ್ ಒಲಿಂಪಿಕ್ಸ್ ವಿಜಯ. ಅಲ್ಲಿಯ ಸಾಧನೆ ಹೀಗಿದೆ.;-

100 ಮೀಟರ್
ಫ್ರೀ ಸ್ಟೈಲ್
51.22 ಸೆಕೆಂಡ್

200 ಮೀಟರ್
ಫ್ರೀ ಸ್ಟೈಲ್
1 ಮಿನಿಟು 52.78 ಸೆಕೆಂಡ್

100 ಮೀಟರ್
ಬಟರ್ ಫ್ಲೈ
54.27 ಸೆಕೆಂಡ್

200 ಮೀಟರ್
ಬಟರ್ ಫ್ಲೈ
2 ಮಿನಿಟು 0.7 ಸೆಕೆಂಡ್

4 ( 200 ಮೀಟ್
ಫ್ರೀ ಸ್ಟೈಲ್ ರಿಲೇ
7 ಮಿನಿಟು 35.78 ಸೆಕೆಂಡ್

4 ( 100 ಮೀಟರ್
ಮೆಡ್ಲಿ ರಿಲೇ
3 ಮಿನಿಟು 48.16 ಸೆಕೆಂಡ್

4 ( 100 ಮೀಟರ್
ಫ್ರೀಸ್ಟೈಲ್ ರಿಲೇ
3 ಮಿನಿಟು 26.42 ಸೆಕೆಂಡ್

	ಈ ಈಜು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ 7 ಚಿನ್ನದ ಪದಕ ಪಡೆದು ವಿಶ್ವದಾಖಲೆ ಸ್ಥಾಪಿಸಿದ, ಈತನಿಗೆ ಮ್ಯೂನಿಕ್ ಯುವಜನರು ಅಭಿಮಾನದಿಂದ 8ನೆಯ ಚಿನ್ನದ ಪದಕವನ್ನೂ ನೀಡಿದರು.
ಈ ಪದಕಗಳನ್ನು ಗೆದ್ದಾಗ ಸಾವಿರಾರು ಪತ್ರಗಳು ಬಂದವಲ್ಲದೇ ಹಲವಾರು ಸಂಸ್ಥೆಗಳು ಜಾಹೀರಾತಿಗಾಗಿ ಈತನನ್ನು ಬೇಡಿ ಬಂದವು. ಏಳು ಚಿನ್ನದ ಪದಕ ಧರಿಸಿದ ಈತನ ಭಾವಚಿತ್ರಕ್ಕಾಗಿ ಜರ್ಮನಿಯ ಪತ್ರಿಕೆಯೊಂದು 10.000 ರೂಪಾಯಿ ನೀಡಿತು. ಮ್ಯೂನಿಕ್ ಒಲಿಂಪಿಕ್ಸ್ ಅನಂತರ ಈತ ಸ್ಪರ್ಧಾತ್ಮಕ ಈಜುಗಾರಿಕೆಯಿಂದ ನಿರ್ಗಮಿಸುವದಾಗಿ ಹೇಳಿಕೆಯಿತ್ತ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ